25 ಜನರಿಗೆ ಚಿಕನ್ ದಮ್ ಬಿರಿಯಾನಿ ಮಾಡುವ ಸುಲಭ ವಿಧಾನ

ಚಿಕನ್ ದಮ್ ಬಿರಿಯಾನಿ ಎಂದರೆ ಎಲ್ಲರೂ ಇಷ್ಟಪಡುವ ಒಂದು ವಿಶೇಷ ಮತ್ತು ರುಚಿಕರವಾದ ಖಾದ್ಯವಾಗಿದೆ. ಮದುವೆ, ಹಬ್ಬ, ಕುಟುಂಬ ಸಮಾರಂಭಗಳು ಮತ್ತು ಸ್ನೇಹಿತರ ಕೂಟಗಳಲ್ಲಿ ಈ ಬಿರಿಯಾನಿಗೆ ವಿಶೇಷ ಸ್ಥಾನವಿದೆ. ಸರಿಯಾದ ಮಸಾಲೆ, ಚೆನ್ನಾಗಿ ಮೆರಿನೇಟ್ ಮಾಡಿದ ಚಿಕನ್ ಮತ್ತು ದಮ್‌ನಲ್ಲಿ ನಿಧಾನವಾಗಿ ಬೇಯಿಸಿದ ಅಕ್ಕಿ — ಇವೆಲ್ಲ ಸೇರಿ ಬಿರಿಯಾನಿಗೆ ಅದ್ಭುತವಾದ ರುಚಿ ಮತ್ತು ಮನಮೋಹಕ ಸುವಾಸನೆ ನೀಡುತ್ತವೆ. ದಮ್ ವಿಧಾನದಲ್ಲಿ ಬೇಯಿಸುವುದರಿಂದ ಪ್ರತಿಯೊಂದು ಅಕ್ಕಿ ಕಣದಲ್ಲೂ ಮಸಾಲೆಯ ಸೊಗಸಾದ ರುಚಿ ತುಂಬಿರುತ್ತದೆ. ಈ ಬಿರಿಯಾನಿಯ ವಿಶೇಷತೆ ಎಂದರೆ ಚಿಕನ್ ತುಂಬಾ ಸಾಫ್ಟ್ ಆಗಿ ಮತ್ತು ಜ್ಯೂಸಿಯಾಗಿ ತಯಾರಾಗುತ್ತದೆ. ಮೇಲಿಂದ ಹಾಕುವ ಫ್ರೈ ಮಾಡಿದ ಈರುಳ್ಳಿ ಮತ್ತು ತುಪ್ಪ ಬಿರಿಯಾನಿಯ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

          ಬಿಸಿ ಬಿಸಿ ಬಿರಿಯಾನಿಯನ್ನು ರೈತಾ, ಸಲಾಡ್ ಅಥವಾ ಉಪ್ಪಿನಕಾಯಿ ಜೊತೆ ಸವಿದರೆ ಅದರ ರುಚಿ ಇನ್ನಷ್ಟು ಅದ್ಭುತವಾಗುತ್ತದೆ. ಈ ಬಿರಿಯಾನಿಯ ಸುವಾಸನೆ ಮನೆ ತುಂಬ ಹರಡಿ ಎಲ್ಲರಿಗೂ ತಿನ್ನಬೇಕು ಅನ್ನಿಸುವಂತೆ ಮಾಡುತ್ತದೆ. ದಮ್‌ನಲ್ಲಿ ನಿಧಾನವಾಗಿ ಬೇಯುವುದರಿಂದ ಚಿಕನ್ ಮತ್ತು ಅಕ್ಕಿ ಮಸಾಲೆಯ ರುಚಿಯನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ. ಪ್ರತಿಯೊಂದು ಲೇಯರ್‌ನಲ್ಲೂ ಪುದೀನಾ, ಕೊತ್ತಂಬರಿ ಮತ್ತು ಮಸಾಲೆಗಳ ಸೊಗಸಾದ ಫ್ಲೇವರ್ ಅನುಭವವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಮಾಡುವಾಗಲೂ ಸರಿಯಾದ ವಿಧಾನ ಅನುಸರಿಸಿದರೆ ಬಿರಿಯಾನಿಯ ರುಚಿ ಇನ್ನಷ್ಟು ಉತ್ತಮವಾಗುತ್ತದೆ. ಈಗ 25 ಜನರಿಗೆ ರೆಸ್ಟೋರೆಂಟ್ ಸ್ಟೈಲ್ ಚಿಕನ್ ದಮ್ ಬಿರಿಯಾನಿ ಮಾಡುವ ಸಂಪೂರ್ಣ ವಿಧಾನವನ್ನು ವಿವರವಾಗಿ ನೋಡೋಣ.

ಬೇಕಾಗುವ ಪದಾರ್ಥಗಳು:

ಚಿಕನ್ ಮೆರಿನೇಟ್ ಮಾಡಲು

• ಚಿಕನ್ – 4 ಕಿಲೋ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 250 ಗ್ರಾಂ
• ಕೆಂಪು ಮೆಣಸಿನ ಪುಡಿ – 50 ಗ್ರಾಂ
• ಹಸಿಮೆಣಸಿನ ಪೇಸ್ಟ್ – 50 ಗ್ರಾಂ
• ಅರಿಶಿನ ಪುಡಿ – 1 ಟೇಬಲ್ ಸ್ಪೂನ್
• ಉಪ್ಪು – ರುಚಿಗೆ ತಕ್ಕಷ್ಟು
• ಗರಂ ಮಸಾಲಾ ಪುಡಿ – 2 ಟೀ ಸ್ಪೂನ್
• ಧನಿಯಾ ಪುಡಿ – 2 ಟೀ ಸ್ಪೂನ್
• ಶಾಹಿ ಜೀರಿಗೆ – 1 ಟೇಬಲ್ ಸ್ಪೂನ್
• ಲವಂಗ – 5 ರಿಂದ 6
• ದಾಲ್ಚಿನ್ನಿ – 5 ತುಂಡು
• ಕೇಸರಿ – 1 ಗ್ರಾಂ
• ಕೊತ್ತಂಬರಿ ಸೊಪ್ಪು – 1 ಮುಷ್ಟಿ
• ಪುದೀನಾ – 1 ಮುಷ್ಟಿ
• ಏಲಕ್ಕಿ ಪುಡಿ – ½ ಟೀ ಸ್ಪೂನ್
• ಮೊಸರು – 1 ಕಿಲೋ
• ನಿಂಬೆ ರಸ – 4 ನಿಂಬೆಹಣ್ಣಿನದು
• ಫ್ರೈ ಮಾಡಿದ ಈರುಳ್ಳಿ – 1 ಕಿಲೋ
• ಎಣ್ಣೆ – ಸುಮಾರು 300 ಗ್ರಾಂ
• ನೀರು – 1 ಗ್ಲಾಸ್


ಅಕ್ಕಿ ಬೇಯಿಸಲು:

• ಬಸ್ಮತಿ ಅಕ್ಕಿ – 4 ಕಿಲೋ
• ನೀರು – 25 ಲೀಟರ್
• ಉಪ್ಪು – 6 ಟೇಬಲ್ ಸ್ಪೂನ್
• ಏಲಕ್ಕಿ ಪುಡಿ – 2 ಟೀ ಸ್ಪೂನ್
• ಶಾಹಿ ಜೀರಿಗೆ – 2 ಟೀ ಸ್ಪೂನ್
• ಲವಂಗ – 5 ರಿಂದ 6
• ದಾಲ್ಚಿನ್ನಿ – 5 ರಿಂದ 6 ತುಂಡು
• ಪುದೀನಾ – 1 ಮುಷ್ಟಿ
• ಕೊತ್ತಂಬರಿ – 1 ಮುಷ್ಟಿ


ಹಂತ 1 – ಈರುಳ್ಳಿ ಫ್ರೈ ಮಾಡುವುದು:

       ಮೊದಲು ಸುಮಾರು ಒಂದೂವರೆ ಕಿಲೋ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಬೇಕು. ಅದರಲ್ಲಿ ಒಂದು ಕಿಲೋ ಈರುಳ್ಳಿಯನ್ನು ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಬೇಕು. ಫ್ರೈ ಮಾಡಿದ ನಂತರ ಅದನ್ನು ತೆಗೆಯಿಸಿ ತಣ್ಣಗಾಗಲು ಬಿಡಬೇಕು. ನಂತರ ಅದರ ಅರ್ಧ ಭಾಗವನ್ನು ಕೈಯಿಂದ ಸ್ವಲ್ಪ ಪುಡಿ ಮಾಡಿಕೊಂಡು ಮೆರಿನೇಷನ್‌ಗೆ ಬಳಸಬೇಕು. ಉಳಿದ ಭಾಗವನ್ನು ದಮ್ ಮಾಡುವ ಸಮಯದಲ್ಲಿ ಅಕ್ಕಿಯ ಮೇಲ್ಭಾಗಕ್ಕೆ ಹಾಕಲು ಬೇರ್ಪಡಿಸಿಡಬೇಕು.


ಹಂತ 2 – ಚಿಕನ್ ಮೆರಿನೇಟ್ ಮಾಡುವುದು:

          ಒಂದು ದೊಡ್ಡ ಪಾತ್ರೆಯಲ್ಲಿ ಚಿಕನ್ ಹಾಕಿ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಹಸಿಮೆಣಸಿನ ಪೇಸ್ಟ್, ಅರಿಶಿನ, ಉಪ್ಪು, ಗರಂ ಮಸಾಲಾ, ಧನಿಯಾ ಪುಡಿ, ಶಾಹಿ ಜೀರಿಗೆ, ಲವಂಗ ಮತ್ತು ದಾಲ್ಚಿನ್ನಿ ಸೇರಿಸಬೇಕು.

ನಂತರ ಅದಕ್ಕೆ:
• ಪುದೀನಾ
• ಕೊತ್ತಂಬರಿ
• ಏಲಕ್ಕಿ ಪುಡಿ
• ಕೇಸರಿ
• ಮೊಸರು
• ನಿಂಬೆ ರಸ
• ಫ್ರೈ ಮಾಡಿದ ಈರುಳ್ಳಿ
• ಎಣ್ಣೆ

     ಇವೆಲ್ಲವನ್ನು ಸೇರಿಸಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಬೇಕು.

ನಂತರ ಒಂದು ಗ್ಲಾಸ್ ನೀರು ಸೇರಿಸಿ ಮತ್ತೆ ಮಿಕ್ಸ್ ಮಾಡಿ ಸುಮಾರು ಅರ್ಧ ಗಂಟೆ ಮೆರಿನೇಟ್ ಆಗಲು ಬಿಡಬೇಕು.


ಹಂತ 3 – ಅಕ್ಕಿ ತಯಾರಿಸುವುದು:

      ಬಸ್ಮತಿ ಅಕ್ಕಿಯನ್ನು ಮೊದಲು ಒಂದು ಅಥವಾ ಎರಡು ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಉಪ್ಪು, ಏಲಕ್ಕಿ ಪುಡಿ, ಲವಂಗ, ದಾಲ್ಚಿನ್ನಿ ಮತ್ತು ಶಾಹಿ ಜೀರಿಗೆ ಸೇರಿಸಬೇಕು. ನೀರು ಚೆನ್ನಾಗಿ ಕುದಿಯಲು ಆರಂಭಿಸಿದ ನಂತರ ನೆನೆಸಿದ ಅಕ್ಕಿಯನ್ನು ಹಾಕಬೇಕು

         ಈ ಬಿರಿಯಾನಿ ಕಚ್ಚಿ ಗೋಷ್ಟ್ ದಮ್ ಬಿರಿಯಾನಿಯಾಗಿರುವುದರಿಂದ ಅಕ್ಕಿಯನ್ನು ಸಂಪೂರ್ಣ ಬೇಯಿಸಬಾರದು. ಕೇವಲ ಎರಡು ನಿಮಿಷ ಮಾತ್ರ ಬೇಯಿಸಿ ಅರ್ಧ ಬೇಯಿದ ಸ್ಥಿತಿಯಲ್ಲಿ ತೆಗೆದುಕೊಳ್ಳಬೇಕು.


ಹಂತ 4 – ಬಿರಿಯಾನಿ ಲೇಯರ್ ಮಾಡುವುದು:

           ಮೆರಿನೇಟ್ ಮಾಡಿದ ಚಿಕನ್ ಮೇಲ್ಭಾಗಕ್ಕೆ ಅರ್ಧ ಬೇಯಿಸಿದ ಅಕ್ಕಿಯನ್ನು ಸಮವಾಗಿ ಹಾಕಬೇಕು. ನಂತರ ಅಕ್ಕಿಯ ಮೇಲ್ಭಾಗಕ್ಕೆ ಸ್ವಲ್ಪ ಬಿರಿಯಾನಿ ನೀರು, ಹಳದಿ ಫುಡ್ ಕಲರ್ ಮಿಶ್ರಿತ ನೀರು ಮತ್ತು ಉಳಿದ ಫ್ರೈ ಮಾಡಿದ ಈರುಳ್ಳಿ ಹಾಕಬೇಕು.

ಈ ಹಂತದಲ್ಲಿ ಬಿರಿಯಾನಿಯ ಸುವಾಸನೆ ಇನ್ನಷ್ಟು ಹೆಚ್ಚಾಗುತ್ತದೆ.


ಹಂತ 5 – ದಮ್ ಮಾಡುವುದು:

      ಈಗ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ ಮೊದಲು ಹೈ ಫ್ಲೇಮ್ ಮೇಲೆ ಸುಮಾರು 20 ನಿಮಿಷ ಬೇಯಿಸಬೇಕು. ನಂತರ ಒಂದು ದೊಡ್ಡ ತವಾ ವನ್ನು ಬಿಸಿ ಮಾಡಿ ಅದರ ಮೇಲೆ ಬಿರಿಯಾನಿ ಪಾತ್ರೆಯನ್ನು ಇಟ್ಟು ಮಧ್ಯಮದಿಂದ ಕಡಿಮೆ ಉರಿಯಲ್ಲಿ ಇನ್ನೂ 20 ನಿಮಿಷ ದಮ್ ಮಾಡಬೇಕು.

ಈ ರೀತಿಯಾಗಿ ದಮ್ ಮಾಡಿದರೆ ಚಿಕನ್ ಚೆನ್ನಾಗಿ ಬೇಯಿ, ಅಕ್ಕಿ ಎಲ್ಲಾ ಮಸಾಲೆಯ ರುಚಿಯನ್ನು ಹೀರಿಕೊಂಡು ಅದ್ಭುತವಾದ ಬಿರಿಯಾನಿ ಸಿದ್ಧವಾಗುತ್ತದೆ.


ಕೊನೆಯ ಹಂತ

ದಮ್ ಆದ ನಂತರ ಮೇಲಿನಿಂದ ಸುಮಾರು 100 ಗ್ರಾಂ ತುಪ್ಪ ಹಾಕಬೇಕು. ಇದರಿಂದ ಬಿರಿಯಾನಿಗೆ ಇನ್ನಷ್ಟು ರಿಚ್ ರುಚಿ ಮತ್ತು ಸುವಾಸನೆ ಬರುತ್ತದೆ.

ಈಗ ಬಿಸಿ ಬಿಸಿ ಚಿಕನ್ ದಮ್ ಬಿರಿಯಾನಿ ಸರ್ವ್ ಮಾಡಲು ಸಿದ್ಧವಾಗಿದೆ. ಇದನ್ನು ರೈತಾ, ಸಲಾಡ್ ಅಥವಾ ಉಪ್ಪಿನಕಾಯಿ ಜೊತೆ ಸರ್ವ್ ಮಾಡಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

Leave a Comment

Your email address will not be published. Required fields are marked *

Scroll to Top