ಟಾಕ್ಸಿಕ್ ಜನರನ್ನು ಇಗ್ನೋರ್ ಮಾಡುವುದು ಹೇಗೆ? ಆರ್ಟ್ ಆಫ್ ಇಗ್ನೋರೆನ್ಸ್ ಪೂರ್ಣ ಗೈಡ್

ಎಲ್ಲವೂ ಇದ್ದರೂ ಏನೋ ಕೊರತೆ

ತುಂಬಾ ಜನರ ಬಳಿ ಎಲ್ಲವೂ ಇರುತ್ತದೆ – ಒಳ್ಳೆಯ ಕೆಲಸ, ಸಮಯಕ್ಕೆ ಸರಿಯಾಗಿ ಬರುವ ಸಂಬಳ, ಪ್ರತಿಭೆ, ಉತ್ತಮ ಜ್ಞಾನ, ಫಿಟ್‌ನೆಸ್, ಒಳ್ಳೆಯ ಅಭ್ಯಾಸಗಳು – ಎಲ್ಲವೂ ಇರುತ್ತದೆ. ಆದರೆ ಇಷ್ಟೆಲ್ಲಾ ಇದ್ದರೂ ಏನೋ ಒಂದು ಕೊರತೆ ಕಾಡುತ್ತಿರುತ್ತದೆ. ಎಲ್ಲೋ ಶಕ್ತಿ ವ್ಯರ್ಥವಾಗುತ್ತಿರುತ್ತದೆ, ಅಂದುಕೊಂಡಿದ್ದನ್ನು ಮಾಡಲು ಸಾಧ್ಯವಾಗುತ್ತಿಲ್ಲ, ಏನೋ ಒಂದು ರೀತಿಯ ಹತಾಶೆ, ಏಕೋ ನೆಮ್ಮದಿಯೇ ಇಲ್ಲ ಎಂಬ ಭಾವನೆ ಕಾಡುತ್ತಿರುತ್ತದೆ.

ನಿಮ್ಮ ಅರಿವಿಗೆ ಬಾರದೆಯೇ, ನಿಮ್ಮ ಅಮೂಲ್ಯವಾದ ಶಕ್ತಿ ಒಂದು ಕಡೆ ಮೌನವಾಗಿ ಸೋರಿಕೆಯಾಗುತ್ತಿರುತ್ತದೆ. ನಿಮಗೆ ಗೊತ್ತಿಲ್ಲದ ಹಾಗೆ ನೀವು ಆ ಬಲೆಗೆ ಈಗಾಗಲೇ ಬಿದ್ದಿರುತ್ತೀರಿ. ಅದು ಯಾವ ಬಲೆ ಎಂದು ಯೋಚಿಸುತ್ತಿದ್ದೀರಾ? ಇದನ್ನು ನೀವು ಗಂಭೀರ ಸಮಸ್ಯೆ ಎಂದು ಗುರುತಿಸಿಯೇ ಇಲ್ಲ, ಆದರೂ ಇದು ಜೀವನದ ಅತಿ ದೊಡ್ಡ ಶಕ್ತಿಯನ್ನು ಹಾಳುಮಾಡುತ್ತಲೇ ಇರುತ್ತದೆ. ಇದು ಕೇವಲ ಚೆನ್ನಾಗಿ ಸೆಟಲ್ ಆಗಿರುವವರ ಸಮಸ್ಯೆ ಅಲ್ಲ, ಇದು ಎಲ್ಲರ ಸಮಸ್ಯೆ. ಪ್ರತಿಯೊಬ್ಬರೂ ಇದರ ಬಲೆಗೆ ಬಿದ್ದು ಒದ್ದಾಡಿದವರೇ.

ಜಗತ್ತಿನ ಟಾಪ್ ಒಂದು ಪ್ರತಿಶತ ಯಶಸ್ವಿ ವ್ಯಕ್ತಿಗಳು, ದೊಡ್ಡ ದೊಡ್ಡ ಬಿಲಿಯನೇರ್‌ಗಳು ಈ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಈ ಸಮಸ್ಯೆಯನ್ನು ತಪ್ಪಿಸಲು ಅವರು ಮಾತ್ರ ರಹಸ್ಯವಾಗಿ ಬಳಸುವ ಒಂದು ಅಸ್ತ್ರ ಇದೆ – ಅದೇ ದಿ ಆರ್ಟ್ ಆಫ್ ಇಗ್ನೋರೆನ್ಸ್ ಅಂದರೆ ನಿರ್ಲಕ್ಷ್ಯ ಮಾಡುವ ಕಲೆ.

ಹಾಗಿದ್ದರೆ ಇದೇನಿದು “ದಿ ಆರ್ಟ್ ಆಫ್ ಇಗ್ನೋರೆನ್ಸ್”? ನಾವು ಯಾವಾಗ, ಎಲ್ಲಿ, ಯಾರನ್ನು ನಿರ್ಲಕ್ಷಿಸಬೇಕು? ನಾವು ಎಲ್ಲಿ, ಯಾವುದಕ್ಕೆ ಪ್ರತಿಕ್ರಿಯಿಸಬೇಕು? ಜೀವನವನ್ನೇ ಬದಲಾಯಿಸಬಲ್ಲ ಆ ಡಾರ್ಕ್ ಸೈಕಾಲಜಿ ತಂತ್ರಗಳು ಯಾವುವು? ಇವತ್ತಿನ ಈ ಲೇಖನದಲ್ಲಿ ನಾವು ವಿವರವಾಗಿ ನೋಡುತ್ತಾ ಹೋಗೋಣ. ಸರಳ ವಿಚಾರ ಎಂದು ಅನಿಸಬಹುದು, ಆದರೆ ಇದನ್ನು ಪಾಲಿಸಿದರೆ ನಿಮ್ಮ ಜೀವನವೇ ಬದಲಾಗಬಹುದು – ಯಾರಿಗೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಾಗದಷ್ಟು ಮಟ್ಟಿಗೆ ನಿಮ್ಮ ವ್ಯಕ್ತಿತ್ವ, ಧೋರಣೆ ಸಕಾರಾತ್ಮಕವಾಗಿ ಬದಲಾಗಬಹುದು.

ಗಮನ ಎಂದರೆ ಒಂದು ಕರೆನ್ಸಿ

ನಿಮ್ಮ ಗಮನಕ್ಕೆ ಒಂದು ದೊಡ್ಡ ಸತ್ಯ – ನಿಮ್ಮ ಅಟೆನ್ಶನ್ ಅಥವಾ ಗಮನ ಎಂಬುದು ಕೇವಲ ಒಂದು ಪದ ಅಲ್ಲ, ಅದೊಂದು ಕರೆನ್ಸಿ. ಅದು ಹಣ ಇದ್ದಂತೆ. ಈಗ ಯೋಚಿಸಿ – ನೀವು ನಿಮ್ಮ ಹಣವನ್ನು ರಸ್ತೆಯಲ್ಲಿ ಹೋಗುವ ಎಲ್ಲರಿಗೂ ಹಂಚಿಕೊಂಡು ಹೋಗುತ್ತೀರಾ? ಇಲ್ಲ, ಇಲ್ಲ ಅಲ್ಲವೇ? ಆದರೆ ನಿಮ್ಮ ಅಟೆನ್ಶನ್ ಅನ್ನು ಮಾತ್ರ ಎಲ್ಲರಿಗೂ ಉಚಿತವಾಗಿ ಕೊಡುತ್ತಿದ್ದೀರಿ. ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಹಾಕುತ್ತಾರೆ, ನೀವು ತಕ್ಷಣ ಪ್ರತಿಕ್ರಿಯಿಸುತ್ತೀರಿ. ಆಫೀಸ್‌ನಲ್ಲಿ ಯಾರೋ ನಿಮ್ಮನ್ನು ಕೆಣಕುತ್ತಾರೆ, ನೀವು ಅವರೊಂದಿಗೆ ವಾದಕ್ಕೆ ಇಳಿಯುತ್ತೀರಿ.

ಇಲ್ಲಿ ಆಗುತ್ತಿರುವುದೇನೆಂದರೆ – ನಿಮ್ಮ ಭಾವನಾತ್ಮಕ ಶಕ್ತಿ, ನಿಮ್ಮ ಸಮಯ ಎಲ್ಲವನ್ನೂ ಆ ವ್ಯಕ್ತಿಯ ಮೇಲೆ ಹೂಡಿಕೆ ಮಾಡುತ್ತಿದ್ದೀರಿ. ಇದರಿಂದ ನಿಮಗೆ ಸಿಗುತ್ತಿರುವುದು ಕೇವಲ ಹತಾಶೆ, ಮತ್ತೇನೂ ಅಲ್ಲ. ಇಲ್ಲಿ ನಿಮಗೆ ನೀವೇ ಪ್ರಶ್ನೆ ಕೇಳಿಕೊಳ್ಳಬೇಕು – ಎಲ್ಲಿ ನಾನು ಪ್ರತಿಕ್ರಿಯಿಸಬೇಕು? ಇಲ್ಲಿ ನಾನು ಪ್ರತಿಕ್ರಿಯಿಸಿದರೆ ಏನಾದರೂ ಪರಿಣಾಮ ಆಗುತ್ತದೆಯೇ, ಆಗುವುದಿಲ್ಲವೇ? ಇದರ ಉಪಯೋಗ ಇದೆಯೇ, ಇಲ್ಲವೇ? ಎಂದು ವಿಮರ್ಶೆ ಮಾಡಬೇಕು.

ಬಲಶಾಲಿ ಮನಸ್ಥಿತಿಯ ಜನರು ಏನು ಮಾಡುತ್ತಾರೆ?

ಬಲಶಾಲಿ ಮನಸ್ಥಿತಿ ಹೊಂದಿರುವ ಜನರು ಏನು ಮಾಡುತ್ತಾರೆ ಗೊತ್ತಾ? ಅವರು ತಮ್ಮ ಮನಸ್ಸಿನಲ್ಲಿ ಒಂದು ಫಿಲ್ಟರ್ ಇಟ್ಟುಕೊಂಡಿರುತ್ತಾರೆ. ಎಲ್ಲರಿಗೂ ಅಲ್ಲಿ ಪ್ರವೇಶ ಇರುವುದಿಲ್ಲ. ಫಿಲ್ಟರ್ ದಾಟಿ ಎಲ್ಲರಿಗೂ ಹೋಗಲು ಸಾಧ್ಯವಾಗುವುದಿಲ್ಲ. “ಈ ವ್ಯಕ್ತಿಗೆ ನನ್ನ ಸಮಯ ಕೊಡಬಹುದೇ?” ಎಂದು ಯೋಚಿಸುತ್ತಾರೆ. ಅಥವಾ “ಇವನು ಈ ರೀತಿ ಹೇಳುತ್ತಿದ್ದಾನೆ, ಇದು ನನ್ನ ಜೀವನದಲ್ಲಿ ನನ್ನ ಗುರಿ ತಲುಪಲು ಸಹಾಯ ಮಾಡುತ್ತದೆಯೇ” ಅಥವಾ “ಇದೊಂದು ನಕಾರಾತ್ಮಕ ಸ್ವಭಾವ” ಎಂದು ಲೆಕ್ಕ ಹಾಕುತ್ತಾರೆ.

“ಈ ಮನುಷ್ಯ ಸುಮ್ಮನೆ ಸಮಯ ಕಳೆಯುತ್ತಿದ್ದಾನೆ, ಇದರಲ್ಲಿ ಯಾವುದೇ ಪ್ರಯೋಜನ ಇಲ್ಲ, ಬರೀ ವಾದ ಅಷ್ಟೇ” ಎಂದು ಅನಿಸಿದರೆ, ಅವರು ಅದನ್ನು ಕೇವಲ ನಿರ್ಲಕ್ಷಿಸಿ ತಮ್ಮ ಪಾಡಿಗೆ ಮುಂದೆ ಸಾಗುತ್ತಾರೆ. ಇದೇ ನಿರ್ಲಕ್ಷ್ಯಕ್ಕೆ ಇರುವ ಶಕ್ತಿ. ಅವರು ತಮ್ಮ ಗುರಿಯ ಕಡೆಗೆ ಹತ್ತಿರವಾಗುತ್ತಾ ಹೋಗುತ್ತಾರೆ. ಈ ರೀತಿ ಸಮಯ ವ್ಯರ್ಥ ಮಾಡುವುದಿಲ್ಲ, ಶಕ್ತಿ ವ್ಯರ್ಥ ಮಾಡುವುದಿಲ್ಲ.

ಮೌನವೇ ಅತ್ಯಂತ ಪ್ರಬಲವಾದ ಅಸ್ತ್ರ

ಸ್ನೇಹಿತರೆ, ನಮ್ಮ ಜನರಿಗೆ ಮೌನ ಎಂದರೆ ಇಷ್ಟವಾಗುವುದಿಲ್ಲ. ನಾವು ವಾಪಸ್ ಮಾತನಾಡದಿದ್ದರೆ ಏನೋ ಸರಿಯಿಲ್ಲ ಎಂದಲ್ಲ, ಬದಲಿಗೆ ಅವನಿಗೆ ಹೇಗಾದರೂ ಮಾಡಿ ಕೌಂಟರ್ ಕೊಡಬೇಕು, “ಅವನು ಹಾಗೆ ಹೇಳಿದ, ಇವನಿಗೆ ಸರಿಯಾಗಿ ಒಂದು ದಿನ ಮಾಡುತ್ತೇನೆ ನೋಡು” ಎಂಬ ರೀತಿ ಯೋಚಿಸುತ್ತಾ ಇರುತ್ತಾರೆ. ಏನೂ ಮಾಡದಿದ್ದರೆ ನಾವು ದುರ್ಬಲರು ಎಂದು ಅವರು ಅಂದುಕೊಳ್ಳುತ್ತಾರೆ ಎಂಬ ಕಲ್ಪನೆ ಬರುತ್ತದೆ.

ನೀವು ಅಂದುಕೊಂಡಿರುವುದು ಸ್ವಲ್ಪ ಸರಿಯೇ ಇದೆ – ಕೆಲ ಕಡೆ ನಾವು ಮಾತನಾಡಲೇಬೇಕಾಗುತ್ತದೆ. ಯಾರೋ ಏನು ಬೇಕಾದರೂ ಹೇಳಿಕೊಳ್ಳುತ್ತಿದ್ದರೆ, ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಒಂದು ಪ್ರಬಲ ಸಂದೇಶವನ್ನು ರವಾನಿಸಬೇಕಾಗುತ್ತದೆ – “ಶಟ್ ಅಪ್” ಎಂದು ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಟೇಕನ್ ಫಾರ್ ಗ್ರಾಂಟೆಡ್ ಆಗುವ ಅಪಾಯವಿರುತ್ತದೆ, ಸರಿ. ಆದರೆ ನಿಮಗೆ ಒಬ್ಬರ ಬಗ್ಗೆ ಮೊದಲಿನಿಂದಲೂ ಗೊತ್ತಿದ್ದರೆ – “ಈ ಮನುಷ್ಯನೇ ಹೀಗೆ” ಎಂದು ವಿವರವಾಗಿ ತಿಳಿದಿದ್ದರೆ, ಆ ವ್ಯಕ್ತಿ ನಿಮ್ಮನ್ನು ಏನಾದರೂ ಮಾಡಿ ಜಗಳಕ್ಕೆ ಎಳೆಯಬೇಕು ಎಂದು ಕಾಯುತ್ತಿದ್ದರೆ, ಆ ಸಮಯದಲ್ಲಿ ಮೌನ ಎಂಬುದು ನೀವು ಪ್ರಯೋಗಿಸಬಹುದಾದ ಅತಿ ದೊಡ್ಡ ಬ್ರಹ್ಮಾಸ್ತ್ರ.

ಈಗ ನೋಡಿ – ಯಾರಾದರೂ ನಿಮ್ಮನ್ನು ಬೈದಾಗ ನೀವು ವಾಪಸ್ ಬೈದರೆ, ನೀವು ಅವರ ಆಟಕ್ಕೆ ಪ್ರವೇಶ ಕೊಟ್ಟಿರಿ ಎಂದೇ ಅರ್ಥ. ಅವರ ನಿಯಮಗಳ ಆಟಕ್ಕೆ ನೀವು ಪ್ರವೇಶ ಕೊಟ್ಟಿರಿ. ಅವರು ನಿಮ್ಮನ್ನು ಎಲ್ಲಿಗೆ ಬೇಕಾದರೂ ಎಳೆದೊಯ್ಯುತ್ತಾರೆ, ಯಾವ ಮಟ್ಟಕ್ಕೆ ಬೇಕಾದರೂ ಇಳಿಸುತ್ತಾರೆ. ಆದರೆ ನೀವು ಮೌನವಾಗಿದ್ದಾಗ, ಆಟ ನಿಂತೇ ಹೋಗುತ್ತದೆ. ಶಕ್ತಿ ಸ್ವಯಂಚಾಲಿತವಾಗಿ ನಿಮ್ಮ ಕೈಗೆ ಬರುತ್ತದೆ – ಮುಂದೆ ಏನಾಗುತ್ತದೆ ಎಂಬ ಪರಿಸ್ಥಿತಿಯನ್ನು ನಿಯಂತ್ರಿಸುವ ಶಕ್ತಿ.

ಏಕೆಂದರೆ ಮನುಷ್ಯರಿಗೆ ತಾನು ಬೈದಾಗ ಎದುರಿನ ವ್ಯಕ್ತಿ ಪ್ರತಿಕ್ರಿಯಿಸಬೇಕು ಎಂಬ ಆಸೆ ಇರುತ್ತದೆ. ಅದನ್ನೇ “ವ್ಯಾಲಿಡೇಶನ್” ಎನ್ನುವುದು – “ನನ್ನ ಬೈಗುಳ ಕೆಲಸ ಮಾಡಿತು” ಎಂಬ ಭಾವನೆ. ಆದರೆ ನೀವು ಮೌನವಾಗಿದ್ದಾಗ, ಆ ವ್ಯಾಲಿಡೇಶನ್ ಅವರಿಗೆ ಸಿಗುವುದೇ ಇಲ್ಲ. ಕಡೆಗಣಿಸುವುದು ಎಂದರೆ “ನೀನು ನನ್ನ ಮಟ್ಟಕ್ಕೆ ಇಲ್ಲ, ನಿನ್ನ ಮಾತಿಗೆ ಅಷ್ಟು ಕಿಮ್ಮತ್ತಿಲ್ಲ” ಎಂದು ಹೇಳದೆಯೇ ಹೇಳುವುದು. ಇದು ಎದುರಿಗಿರುವ ವ್ಯಕ್ತಿಗೆ ಮಾಡುವ ದೊಡ್ಡ ಅಪಮಾನ – ಏಕೆಂದರೆ ಕಡೆಗಣಿಸುವುದು ಎಂದರೆ “ನೀನು ನನ್ನ ರೇಡಾರ್‌ನಲ್ಲೇ ಇಲ್ಲ” ಎಂದು ತೋರಿಸಿಕೊಟ್ಟ ಹಾಗೆ. ನೀವು ಮೌನವಾಗಿರುವುದೇ ಆ ವ್ಯಕ್ತಿಗೆ ದೊಡ್ಡ ಏಟು ಕೊಡುತ್ತದೆ. ಅವರು ನಿಮ್ಮ ಮೌನದ ಮರ್ಮವನ್ನು ಅರ್ಥ ಮಾಡಿಕೊಳ್ಳಲಾಗದೆ ಒದ್ದಾಡಿಬಿಡುತ್ತಾರೆ.

ಮೌನಕ್ಕೆ ಇಷ್ಟೊಂದು ಶಕ್ತಿ ಇರುವಾಗ, ಮಾತನಾಡಿ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವುದು ಏಕೆ ಹೇಳಿ?

ಬೇಡಿಕೆ ಮತ್ತು ಪೂರೈಕೆಯ ನಿಯಮ ಅನುಸರಿಸಿ

“ಸ್ಟ್ರಾಟಜಿಕ್ ವಿಥ್‌ಡ್ರಾವಲ್” ಅಂದರೆ ಸಂಪೂರ್ಣವಾಗಿ ಜಗತ್ತಿನಿಂದ ದೂರವಾಗುವುದು ಎಂದಲ್ಲ. ಬದಲಾಗಿ ದೈಹಿಕವಾಗಿ ಇದ್ದರೂ ಸಹ, ಭಾವನಾತ್ಮಕವಾಗಿ ಅಸ್ಪೃಶ್ಯರಾಗಿರುವುದು. ನಾವೆಲ್ಲರೂ ಮಾಡುವ ತಪ್ಪೇನು ಗೊತ್ತಾ? ಯಾರಾದರೂ ಸಂದೇಶ ಕಳುಹಿಸಿದ ತಕ್ಷಣ ಪ್ರತ್ಯುತ್ತರ ಕೊಡುವುದು, ಕರೆದ ತಕ್ಷಣ ಓಡಿ ಹೋಗುವುದು – ಹೀಗೆ ಯಾವಾಗಲೂ ಲಭ್ಯ ಇದ್ದಾಗ, ನಿಮ್ಮ ಮೌಲ್ಯ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ಹೀಗಾಗಿ “ಅವನ/ಅವಳ ಕರೆದ ತಕ್ಷಣ ಲಭ್ಯನಿರುತ್ತಾನೆ/ಳೆ” ಎಂಬ ರೀತಿ ಆಗಿಬಿಡುತ್ತದೆ. ನೀವು ಇನ್ನೊಬ್ಬರ ಬಳಕೆಯ ವಸ್ತು ಆಗುವ ಅಪಾಯ ಇರುತ್ತದೆ.

ಇದನ್ನು ಅರ್ಥಶಾಸ್ತ್ರದಲ್ಲಿ “ವೆಬ್ಲೆನ್ ಗುಡ್ ಎಫೆಕ್ಟ್” ಎಂದು ಹೇಳುತ್ತಾರೆ – ಅಂದರೆ ಒಂದು ವಸ್ತುವಿನ ಬೇಡಿಕೆ ಹೆಚ್ಚಾಗಬೇಕಾದರೆ ಅದರ ಪೂರೈಕೆ ಕಡಿಮೆ ಇರಬೇಕು. ಇದನ್ನು ಜೀವನದಲ್ಲಿ ಅನ್ವಯಿಸಿದಾಗ – ನೀವು ಎಲ್ಲದಕ್ಕೂ ಸಿದ್ಧ ಇದ್ದೀರಿ, ಯಾವುದಕ್ಕೂ “ಇಲ್ಲ” ಎನ್ನುವುದಿಲ್ಲ ಎಂದಾದರೆ, ಜನ ನಿಮ್ಮನ್ನು ಬ್ಯಾಕಪ್ ಪ್ಲಾನ್‌ ಥರ ಟ್ರೀಟ್ ಮಾಡುತ್ತಾರೆ. “ಇವನು ನಾವು ಏನು ಹೇಳಿದರೂ ಮಾಡುತ್ತಾನೆ, ಎಲ್ಲದಕ್ಕೂ ಹೌದು ಎಂದೇ ಹೇಳುತ್ತಾನೆ” ಎಂಬ ಟೇಕನ್ ಫಾರ್ ಗ್ರಾಂಟೆಡ್ ಧೋರಣೆ ನಿಮ್ಮ ಬಗ್ಗೆ ಬರುತ್ತದೆ. ನಿಮ್ಮ ಸುತ್ತಮುತ್ತ ಇರುವವರಿಗೆ ಅಂಥ ಭಾವನೆ ಬರುತ್ತದೆ.

 ಅದರ ಬದಲು ನೀವು ಆದ್ಯತೆ (priority) ಆಗಬೇಕು ಎಂದಾದರೆ, ನಿಮ್ಮ ಲಭ್ಯತೆ ಕಡಿಮೆ ಇರಬೇಕು. ಮನುಷ್ಯನ ಮನೋವಿಜ್ಞಾನ ಕೆಲಸ ಮಾಡುವುದೇ ಹೀಗೆ – ಯಾವುದು ಸುಲಭವಾಗಿ ಸಿಗುವುದಿಲ್ಲವೋ ಅದರ ಬಗ್ಗೆ ಆಕರ್ಷಣೆ ಜಾಸ್ತಿ. ನಿಮ್ಮ ಇರುವಿಕೆ ಅಪರೂಪವಾದಾಗ, ನಿಮ್ಮ ಮೌಲ್ಯ ಹೆಚ್ಚಾಗುತ್ತದೆ. “ನೀವು ಯಾವಾಗ ಸಿಗುತ್ತೀರಿ” ಎಂಬ ಅನಿಶ್ಚಿತತೆ ಸಾಮಾನ್ಯವಾಗಿ ನಿಮ್ಮ ಬಗ್ಗೆ ಒಂದು ಗೌರವವನ್ನು ಸೃಷ್ಟಿಸುತ್ತದೆ.

ನಿರ್ಲಕ್ಷ್ಯದ ಮನೋವಿಜ್ಞಾನ ಕೆಲಸ ಮಾಡುವುದು ಹೇಗೆ?

ಯಾರನ್ನಾದರೂ ನೀವು ಸಂಪೂರ್ಣವಾಗಿ ನಿರ್ಲಕ್ಷಿಸಿದಾಗ, ಅವರ ಮೆದುಳಿನಲ್ಲಿ ಏನಾಗುತ್ತದೆ ಗೊತ್ತಾ? ಪ್ಯೂರ್ ಕೇಯಾಸ್ ಅಂದರೆ ಒಂದು ಗೊಂದಲ ಆರಂಭವಾಗುತ್ತದೆ. ಮನುಷ್ಯನ ಮೆದುಳು ಯಾವಾಗಲೂ ಒಂದು ಕ್ಲೋಷರ್ ಹುಡುಕುತ್ತದೆ – ಅಂದರೆ ಒಂದು ಪ್ರಶ್ನೆಗೆ ಉತ್ತರ ಸಿಗಬೇಕು, ಒಂದು ಘಟನೆಗೆ ಕಾರಣ ಬೇಕು. ಆದರೆ ನೀವು ನಿರ್ಲಕ್ಷಿಸಿದಾಗ, ಆ ಮೆದುಳಿಗೆ ಉತ್ತರ ಸಿಗುವುದಿಲ್ಲ. ಅವರು ತಮ್ಮ ತಲೆಯಲ್ಲೇ ನೂರಾರು ಪ್ರಶ್ನೆಗಳನ್ನು ಹಾಕಿಕೊಂಡು ಕೊರಗುತ್ತಾರೆ.

ಇದನ್ನು ಮನಶಾಸ್ತ್ರಜ್ಞರು “ಜೈಗಾರ್ನಿಕ್ ಎಫೆಕ್ಟ್” ಎಂದು ಕರೆಯುತ್ತಾರೆ. ಪೂರ್ಣಗೊಳ್ಳದ ಕೆಲಸಗಳು ಅಥವಾ ಮುಚ್ಚದ ಸಂಭಾಷಣೆಗಳು ಮನುಷ್ಯನ ಮೆದುಳಿನಲ್ಲಿ ಚಕ್ರದಂತೆ ಸುಳಿಯುತ್ತಲೇ ಇರುತ್ತವೆ.

ಇಲ್ಲಿ ಒಂದು ನಿಜ ಜೀವನದ ಉದಾಹರಣೆ ತೆಗೆದುಕೊಳ್ಳಿ – ನೀವು ಯಾರಿಗಾದರೂ ಟೆಕ್ಸ್ಟ್ ಮಾಡಿದಿರಿ, ಬ್ಲೂ ಟಿಕ್ ಬಂತು ಆದರೆ ಪ್ರತ್ಯುತ್ತರ ಬರಲಿಲ್ಲ ಎಂದರೆ ನಿಮ್ಮಲ್ಲಿ ಎಂಥ ಭಾವನೆಯಾಗುತ್ತದೆ? ನಿಮ್ಮ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ ಅಲ್ಲವೇ? ಒತ್ತಡದ ಹಾರ್ಮೋನ್ ಕೂಡ ಏರುತ್ತದೆ, ಡೋಪಮಿನ್ ಮಟ್ಟ ಸಂಪೂರ್ಣ ಕುಸಿಯುತ್ತದೆ. “ಏನಪ್ಪಾ, ನಿರ್ಲಕ್ಷಿಸುತ್ತಿದ್ದಾರಾ? ಏಕೆ ಈ ರೀತಿ ಮಾಡುತ್ತಿದ್ದಾರೆ? ಏನು ಕಾರಣ? ಏಕೆ ಹೀಗೆ?” ಎಂಬ ರೀತಿ ನೂರಾರು ಪ್ರಶ್ನೆಗಳು ಕಾಡಲು ಆರಂಭವಾಗುತ್ತವೆ.

ನಿಮ್ಮನ್ನೂ ಇದೇ ರೀತಿ ಬೇರೆಬೇರೆ ಸಂದರ್ಭಗಳಲ್ಲಿಯೂ ಈ ವಿಚಾರ ಹೀಗೆಯೇ ಕೆಲಸ ಮಾಡುತ್ತದೆ. ಇದೊಂದು ರೀತಿಯ ಮಾನಸಿಕ ಯುದ್ಧ. ನೀವು ಏನೂ ಮಾಡದೇ ಇರುವುದೇ ಅವರ ಮೆದುಳಿನಲ್ಲಿ ಅವರ ವಿರುದ್ಧವೇ ಯುದ್ಧಕ್ಕೆ ಕಾರಣವಾಗುತ್ತದೆ.

ಜೀವನದಿಂದ ದೂರವಿಡಬೇಕಾದ ಮೂರು ಬಗೆಯ ಜನರು

ನಿಮ್ಮ ಜೀವನದಿಂದ ಸಂಪೂರ್ಣವಾಗಿ ದೂರ ಇಡಬೇಕಾದ ಅಥವಾ ನಿರ್ಲಕ್ಷಿಸಿ ಬದಿಗಿಡಬೇಕಾದ ಮೂರು ಬಗೆಯ ಜನರಿದ್ದಾರೆ.

ಒಂದು: ನಿಮ್ಮ ಹಿಂದೆ ಪಿತೂರಿ ಮಾಡುವ ಶತ್ರುಗಳು

ಇವರು ನಿಮ್ಮ ಎದುರುಗಡೆ ನಗುತ್ತಾ, ನಿಮ್ಮ ಹಿತೈಷಿಗಳ ಹಾಗೆಯೇ ಇರುತ್ತಾರೆ. ಆದರೆ ನಿಮ್ಮ ಬೆಳವಣಿಗೆಯನ್ನು ನೋಡಿ ಒಳಗೊಳಗೆ ಉರಿಯುತ್ತಿರುತ್ತಾರೆ. ನೀವು ಸ್ವಲ್ಪ ಎಡವಿದರೂ ಸಾಕು, ಚಪ್ಪಾಳೆ ತಟ್ಟಲು ಕಾಯುತ್ತಿರುತ್ತಾರೆ. ಇಂಥವರೊಂದಿಗೆ ಜಗಳಕ್ಕೆ ಹೋಗಬೇಡಿ. ಕೇವಲ ಮೌನವಾಗಿ ನಿಮ್ಮ ಪಾಡಿಗೆ ನೀವು ಅಂತರವನ್ನು ಕಾಪಾಡಿಕೊಳ್ಳಿ. ಇವರನ್ನು ಬಯಲಿಗೆಳೆಯಲು ಹೋಗಬೇಡಿ – ನಿಮ್ಮ ಯಶಸ್ಸೇ ಅವರಿಗೆ ಉತ್ತರ.

ಎರಡು: ಕೇವಲ ಟೀಕೆ ಮಾಡುವ ಕ್ರಿಟಿಕ್ಸ್

ಇವರಿಗೆ ಸ್ವಂತ ಜೀವನ ಇಲ್ಲ. ಟೀಕಿಸುವುದೇ ಇವರ ಕೆಲಸ. ನೀವು ಸುಮ್ಮನೆ ಕುಳಿತಿದ್ದರೂ ಬೈಯುತ್ತಾರೆ, ಸಾಧನೆ ಮಾಡಿದರೂ ಬೈಯುತ್ತಾರೆ, ಕಾಲೆಳೆಯುತ್ತಾರೆ. ಇವರ ಕೆಲಸವೇ ನಿಮ್ಮಲ್ಲಿ ತಪ್ಪು ಹುಡುಕುವುದು. ಅವರಿಂದ ನಿಮಗೆ ಒಂದು ಬಿಡಿಗಾಸಿನ ಲಾಭವೂ ಇರುವುದಿಲ್ಲ, ಆದರೆ ನಿಮ್ಮ ಆತ್ಮವಿಶ್ವಾಸವನ್ನು ಮಾತ್ರ ಶೂನ್ಯ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇವರಿಗೆಲ್ಲ ವಿವರಣೆ ಕೊಡಲು ಹೋದರೆ ನಿಮ್ಮ ಜೀವನ ಹಾಳಾಗುತ್ತದೆ, ಅಷ್ಟು ಸಮಯ ವ್ಯರ್ಥವಾಗುತ್ತದೆ. ನೀವು ಇವರಿಗೆ ಪ್ರತಿಕ್ರಿಯಿಸಿದರೆ, ಅವರಿಗೆ ಆಮ್ಲಜನಕ ಕೊಟ್ಟಂತೆ. ಆದ್ದರಿಂದ ಅವರನ್ನು ಕಟ್ ಆಫ್ ಮಾಡಿ – ಪ್ರತಿಕ್ರಿಯೆ ಕೊಡಬೇಡಿ, ಹೇಳಿಕೊಂಡಿರುವಂತೆ ಸುಮ್ಮನೆ ಬಿಟ್ಟುಬಿಡಿ.

ಮೂರು: ನಿಮ್ಮ ಶಕ್ತಿ ಹೀರುವ ಪ್ಯಾರಾಸೈಟ್ಗಳು

ಇವರು ನಿಮ್ಮ ಸ್ನೇಹಿತರ ಹಾಗೆಯೇ ಇರುತ್ತಾರೆ, ಆದರೆ ಯಾವಾಗಲೂ ಸಮಸ್ಯೆಗಳನ್ನು ಇಟ್ಟುಕೊಂಡೇ ಬರುತ್ತಾರೆ. ಕೆಲವೊಮ್ಮೆ ಸಹಾಯ ಮಾಡಿದರೂ ಮತ್ತೆಮತ್ತೆ ಸಹಾಯ ಕೇಳುತ್ತಾರೆ. ನಿಮ್ಮ ಸಮಯ, ನಿಮ್ಮ ಮಾನಸಿಕ ಶಾಂತಿಯನ್ನು ಹಾಳುಮಾಡುತ್ತಾರೆ. ಅವರ ಜೀವನದ ಕಸವನ್ನೆಲ್ಲ ತೆಗೆದುಕೊಂಡು ಬಂದು ನಿಮ್ಮ ಜೀವನಕ್ಕೆ ಸುರಿಯುತ್ತಾರೆ. ಇವರಿಗೆ ಬೆಲೆಯನ್ನೇ ಕೊಡಬಾರದು ಎಂದಲ್ಲ, ಇವರು ಹೇಳುವುದನ್ನೆಲ್ಲ ಕೇಳಬೇಕು. ಆದರೆ ಅವರ ಎಲ್ಲ ಮಾತುಗಳಿಗೆ ಕಿವಿ ಕೊಟ್ಟರೂ ಸಹ, ಆ ಕಸವನ್ನು ನಿಮ್ಮ ಜೀವನದೊಳಗೆ ಬಿಟ್ಟುಬಿಟ್ಟು ಗಲೀಜು ಮಾಡಲು ಬಿಡಬಾರದು. ನಿಮ್ಮ ಕಿವಿಯ ತನಕ ಮಾತ್ರ ಬರಬೇಕು, ಆ ಕಸ ಹೃದಯಕ್ಕೆ ಹೋಗಬಾರದು. ನಿಮ್ಮ ದಾರಿಯಲ್ಲಿ ನೀವು ನಡೆಯಬೇಕು. ಅವರು ನಿಮ್ಮ ಜೀವನದಲ್ಲಿ ಡಿಸ್ಟ್ರಾಕ್ಷನ್ ಆಗಬಾರದು.

ಈ ಮೂರು ಬಗೆಯ ಜನರಿಗೆ ನೀವು ಯಾವಾಗ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತೀರೋ, ಆಗ ನಿಮ್ಮಲ್ಲಿ ಒಂದು ದೊಡ್ಡ ಬದಲಾವಣೆ ಬರುತ್ತದೆ. ನೀವು ಪ್ರತಿಕ್ರಿಯಿಸದೆ ಸುಮ್ಮನಾದ ತಕ್ಷಣ, ಅವರಿಗೆ ನಿಮ್ಮಿಂದ ಶಕ್ತಿ ಸಿಗುವುದಿಲ್ಲ. ಆಗ ಅವರೇ ತಾವಾಗಿಯೇ ನಿಮ್ಮ ಜೀವನದಿಂದ ಮರೆಯಾಗುತ್ತಾರೆ. ಇದೇ “ಆರ್ಟ್ ಆಫ್ ಇಗ್ನೋರೆನ್ಸ್”ನ ಶಕ್ತಿ.

ಭಾವನೆಗಳನ್ನು ನಿಯಂತ್ರಿಸುವುದನ್ನು ಕಲಿಯಿರಿ

ಜನರು ನಿಮ್ಮನ್ನು ಏಕೆ ಸುಲಭವಾಗಿ ಮ್ಯಾನಿಪುಲೇಟ್ ಮಾಡುತ್ತಾರೆ ಗೊತ್ತಾ? ನಿಮಗೆ ಕೆಲ ಭಾವನಾತ್ಮಕ ಟ್ರಿಗರ್‌ಗಳಿರುತ್ತವೆ. ಯಾರೋ ಒಬ್ಬರು ನಿಮ್ಮನ್ನು ಸೋಮಾರಿ ಎಂದ ತಕ್ಷಣ ನೀವು ಸಿಡಿದೆದ್ದು ವಿವರಿಸಲು ಆರಂಭಿಸುತ್ತೀರಿ – “ನಾನು ಹಾಗಲ್ಲ, ನಾನು ಎಷ್ಟು ಕೆಲಸ ಮಾಡುತ್ತೇನೆ ಎಂದು ನಿಮಗೇನು ಗೊತ್ತು” ಎಂದೆಲ್ಲ ಮಾತನಾಡಿಬಿಡುತ್ತೀರಿ. ಅಂದರೆ ಅವರು ಕೇವಲ ಒಂದು ಬಟನ್ ಒತ್ತಿದರೂ ನೀವು ಪ್ರತಿಕ್ರಿಯಿಸುತ್ತೀರಿ. ಇಲ್ಲಿ ನಷ್ಟ ಯಾರಿಗೆ?

ಒಂದು ಸಲ, ಎರಡು ಸಲ, ಮೂರು ಸಲ ವಿವರಣೆ ಕೊಡುವುದು ಸರಿ – ಮುಖ್ಯವಾದ ವ್ಯಕ್ತಿಯೇ ಏನೋ ಹೇಳುತ್ತಿದ್ದಾರೆ ಎಂದಾದರೆ ಸ್ಪಷ್ಟೀಕರಣ ಕೊಡುವುದು ಸರಿಯೇ. ಅದಕ್ಕಿಂತ ಹೆಚ್ಚು ಪದೇಪದೇ ಹೇಳಿಕೊಂಡಿರುವುದಕ್ಕೆ ಅರ್ಥ ಇರುವುದಿಲ್ಲ. ಈ ರೀತಿ ವಿವರಣೆ ಕೊಡದೆ, ಟ್ರಿಗರ್ ಆಗದೆ ಇರುವಂತೆ ಭಾವನಾತ್ಮಕ ಕೋಟೆಯನ್ನು ಕಟ್ಟಿಕೊಂಡರೆ, ಯಾರೇ ಏನೇ ಹೇಳಿದರೂ ನೀವು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. “ನನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಇವನು ಯಾರು ಏನು ಹೇಳಿದರೆ ನನಗೇನು” ಎಂಬ ಮನಸ್ಥಿತಿ ಬರುತ್ತದೆ.

ನಿಮ್ಮೊಳಗಿನ ಶಾಂತಿಯನ್ನು ಹೊರಗಿನ ಗದ್ದಲ, ಗಲಾಟೆಗಳು ಕದಡಲು ಸಾಧ್ಯವಾಗದಿದ್ದಾಗ, ಆಗ ನಿಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಾಗುವುದಿಲ್ಲ. ಸ್ನೇಹಿತರೆ, ಕೊನೆಗೆ ಎಲ್ಲ ಸಮಯದಲ್ಲಿ ಹೋರಾಡುತ್ತಿರುವುದೇ ರಣತಂತ್ರ ಅಲ್ಲ. ಕೆಲವೊಮ್ಮೆ ಏನೂ ಮಾಡದೆ ಸುಮ್ಮನಿರುವುದೂ ಸಹ ಒಂದು ರಣತಂತ್ರ. ಯಾರಾದರೂ ನಿಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸುತ್ತಿದ್ದರೆ, ನೀವು ಊರೆಲ್ಲ ಹೋಗಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಸುಮ್ಮನೆ ನಿಮ್ಮ ಪಾಡಿಗೆ ನೀವು ಒಳ್ಳೆಯ ಕೆಲಸವನ್ನು ಮುಂದುವರಿಸಿ.

ಇದೊಂದು ರೀತಿ ಸ್ಟಾಕ್ ಮಾರ್ಕೆಟ್ ಇದ್ದಂತೆ. ಕಳೆದ 20 ವರ್ಷಗಳ ಸ್ಟಾಕ್ ಮಾರ್ಕೆಟ್‌ನ ಇತಿಹಾಸ ತೆಗೆದು ನೋಡಿ – ಪ್ರತಿ ದಿನ ಬೆಳಗಾದರೆ ಸುದ್ದಿಗೆ ಪ್ರತಿಕ್ರಿಯಿಸುತ್ತಾ ಕೊಂಡುಕೊಳ್ಳುವ, ಮಾರುವ ಆಕ್ಟಿವ್ ಡೇ ಟ್ರೇಡರ್‌ಗಳಿಗಿಂತ, ಒಮ್ಮೆ ಹೂಡಿಕೆ ಮಾಡಿ ಸುಮ್ಮನೆ ಕುಳಿತುಕೊಳ್ಳುವ ಪ್ಯಾಸಿವ್ ಇನ್ವೆಸ್ಟರ್‌ಗಳು ಅಥವಾ ದೀರ್ಘಾವಧಿಯ ದೂರದೃಷ್ಟಿಯ ಹೂಡಿಕೆದಾರರು ದೊಡ್ಡ ಸಂಪತ್ತಿನ ಕೋಟೆಯನ್ನು ಕಟ್ಟಿಕೊಂಡಿರುತ್ತಾರೆ. ಆದ್ದರಿಂದ ಸ್ನೇಹಿತರೆ, ಗಮನ ಇರಲಿ – ಪ್ರತಿಯೊಂದು ಮಾತಿಗೂ ಪ್ರತಿಕ್ರಿಯೆ ಕೊಡುವ ಅಗತ್ಯ ಇಲ್ಲ. ನಿಮ್ಮ ಶಕ್ತಿಯನ್ನು ಕಾಪಾಡಿಕೊಳ್ಳಿ, ನಿಮ್ಮ ಸಮಯವನ್ನು ಉಪಯುಕ್ತ ಕೆಲಸಗಳಿಗೆ ಮತ್ತು ಯೋಗ್ಯರಾದವರೊಂದಿಗೆ ಮಾತ್ರ ಖರ್ಚು ಮಾಡಿ.

ನಿಮ್ಮ ಶಕ್ತಿಯನ್ನು ಕದಿಯುತ್ತಿರುವ ಅದೃಶ್ಯ ಸೋರಿಕೆ

ದೈನಂದಿನ ಜೀವನದಲ್ಲಿ ಈ ಕಲೆಯನ್ನು ಅಳವಡಿಸಿಕೊಳ್ಳುವುದು ಹೇಗೆ?

ಸಿದ್ಧಾಂತ ಅರ್ಥ ಮಾಡಿಕೊಂಡ ಮಾತ್ರಕ್ಕೆ ಜೀವನ ಬದಲಾಗುವುದಿಲ್ಲ. ಇದನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಎತ್ತಿಕೊಂಡು ರಾತ್ರಿ ಬಂದ ಎಲ್ಲಾ ಮೆಸೇಜ್‌ಗಳಿಗೆ, ಕಾಮೆಂಟ್‌ಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಕು ಎಂಬ ಒತ್ತಡದಿಂದ ಮೊದಲು ಹೊರಬರಬೇಕು. ಇದಕ್ಕೆ ಒಂದು ಸರಳ ವಿಧಾನ – ಬೆಳಗ್ಗೆ ಎದ್ದ ಮೊದಲ ಒಂದು ಗಂಟೆ ಫೋನ್ ಮುಟ್ಟದೇ ಇರುವುದು. ಈ ಸಮಯದಲ್ಲಿ ನಿಮ್ಮ ಮನಸ್ಸು ಶಾಂತವಾಗಿ, ಇಡೀ ದಿನಕ್ಕೆ ಬೇಕಾದ ಸ್ಪಷ್ಟತೆಯನ್ನು ಪಡೆದುಕೊಳ್ಳುತ್ತದೆ.

ಪ್ರತಿಯೊಂದು ಸಂದೇಶಕ್ಕೂ, ಪ್ರತಿಯೊಂದು ಕಾಮೆಂಟ್‌ಗೂ ತಕ್ಷಣ ಪ್ರತಿಕ್ರಿಯಿಸುವ ಬದಲು, “ಇದಕ್ಕೆ ಈಗಲೇ ಉತ್ತರ ಕೊಡಬೇಕೇ, ಅಥವಾ ಸ್ವಲ್ಪ ಸಮಯದ ನಂತರ ಕೊಟ್ಟರೂ ಆಗುತ್ತದೆಯೇ” ಎಂದು ಒಂದು ಕ್ಷಣ ಯೋಚಿಸುವ ಅಭ್ಯಾಸ ರೂಢಿಸಿಕೊಳ್ಳಿ. ಈ ಒಂದು ಕ್ಷಣದ ವಿರಾಮವೇ ನಿಮಗೆ ಪ್ರತಿಕ್ರಿಯೆ (reaction) ಮತ್ತು ಪ್ರತಿಸ್ಪಂದನೆ (response) ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಸುತ್ತದೆ. ಪ್ರತಿಕ್ರಿಯೆ ಎಂಬುದು ಭಾವನೆಯ ಆಧಾರದ ಮೇಲೆ ತಕ್ಷಣ ಬರುವಂಥದ್ದು, ಆದರೆ ಪ್ರತಿಸ್ಪಂದನೆ ಎಂಬುದು ಯೋಚಿಸಿ, ವಿವೇಚಿಸಿ ಕೊಡುವಂಥದ್ದು.

ಸಾಮಾಜಿಕ ಜಾಲತಾಣದಲ್ಲಿ ಈ ಕಲೆಯ ಪ್ರಯೋಗ

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳೇ ನಮ್ಮ ಶಕ್ತಿಯನ್ನು ಅತಿ ಹೆಚ್ಚು ಹೀರಿಕೊಳ್ಳುವ ಸ್ಥಳಗಳಾಗಿವೆ. ಯಾರೋ ಅಪರಿಚಿತರು ನಿಮ್ಮ ಪೋಸ್ಟ್‌ಗೆ ನಕಾರಾತ್ಮಕ ಕಾಮೆಂಟ್ ಹಾಕುತ್ತಾರೆ, ನೀವು ಅವರಿಗೆ ಉತ್ತರ ಕೊಡಲು ಗಂಟೆಗಟ್ಟಲೆ ಕಾಲಹರಣ ಮಾಡುತ್ತೀರಿ. ಇಲ್ಲಿ ನೆನಪಿಡಬೇಕಾದ ಸೂತ್ರ – ಪ್ರತಿಯೊಂದು ಅಭಿಪ್ರಾಯಕ್ಕೂ ನಿಮ್ಮ ಪ್ರತಿಕ್ರಿಯೆ ಅಗತ್ಯವಿಲ್ಲ. ಅಪರಿಚಿತ ವ್ಯಕ್ತಿಯ ಅಭಿಪ್ರಾಯ ನಿಮ್ಮ ಜೀವನದ ಗುಣಮಟ್ಟವನ್ನು ಬದಲಾಯಿಸುವುದಿಲ್ಲ, ಆದರೆ ಅದಕ್ಕೆ ಪ್ರತಿಕ್ರಿಯಿಸುತ್ತಾ ಕಳೆಯುವ ನಿಮ್ಮ ಸಮಯ ಮಾತ್ರ ವ್ಯರ್ಥವಾಗುತ್ತದೆ.

ಒಂದು ಪ್ರಾಯೋಗಿಕ ವಿಧಾನ – ಪ್ರತಿ ಬಾರಿ ಯಾವುದಾದರೂ ಕಾಮೆಂಟ್ ಅಥವಾ ಸಂದೇಶ ನಿಮ್ಮನ್ನು ಕೆರಳಿಸಿದಾಗ, ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ:

ಇದನ್ನು ಬರೆದವರು ನನ್ನ ಜೀವನದಲ್ಲಿ ನಿಜವಾಗಿಯೂ ಪ್ರಮುಖ ವ್ಯಕ್ತಿಯೇ? ಈ ವಿಷಯಕ್ಕೆ ಒಂದು ವರ್ಷದ ನಂತರವೂ ಮಹತ್ವ ಇರುತ್ತದೆಯೇ? ಇದಕ್ಕೆ ಪ್ರತಿಕ್ರಿಯಿಸುವುದರಿಂದ ನನ್ನ ಗುರಿ ಸಾಧನೆಗೆ ಏನಾದರೂ ಸಹಾಯವಾಗುತ್ತದೆಯೇ?

ಈ ಮೂರು ಪ್ರಶ್ನೆಗಳಿಗೆ “ಇಲ್ಲ” ಎಂಬ ಉತ್ತರ ಬಂದರೆ, ನಿರ್ಲಕ್ಷಿಸುವುದೇ ಸೂಕ್ತ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಕುಟುಂಬ ಮತ್ತು ಸ್ನೇಹಿತರ ವಲಯದಲ್ಲಿ ಗಡಿರೇಖೆಗಳು

ಆರ್ಟ್ ಆಫ್ ಇಗ್ನೋರೆನ್ಸ್ ಎಂದರೆ ಎಲ್ಲರನ್ನೂ ದೂರ ಇಡುವುದು ಎಂದಲ್ಲ. ಇದು ಆಯ್ಕೆಯ ಕಲೆ – ಯಾರಿಗೆ ಎಷ್ಟು ಸ್ಥಾನ ಕೊಡಬೇಕು ಎಂಬುದನ್ನು ಅರಿಯುವುದು. ಕುಟುಂಬ ಮತ್ತು ನಿಜವಾದ ಸ್ನೇಹಿತರ ಜೊತೆ ಆರೋಗ್ಯಕರ ಗಡಿರೇಖೆಗಳನ್ನು (boundaries) ಸ್ಥಾಪಿಸುವುದು ಬಹಳ ಮುಖ್ಯ.

ಉದಾಹರಣೆಗೆ, ಪ್ರತಿ ಬಾರಿ ಕುಟುಂಬದ ಸದಸ್ಯರೊಬ್ಬರು ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡುತ್ತಾ, ನಿಮ್ಮನ್ನು ಭಾವನಾತ್ಮಕವಾಗಿ ಎಳೆದೊಯ್ಯುತ್ತಿದ್ದರೆ, ಪ್ರತಿ ಬಾರಿಯೂ ಪ್ರತಿಕ್ರಿಯಿಸುವ ಬದಲು, ಶಾಂತವಾಗಿ ಆ ಚರ್ಚೆಯಿಂದ ಹಿಂದೆ ಸರಿಯುವುದೂ ಒಂದು ಪ್ರಬುದ್ಧ ನಡೆ. ಇದನ್ನು ಕೋಪದಿಂದ ಅಲ್ಲ, ಶಾಂತಚಿತ್ತದಿಂದ ಮಾಡುವುದು ಮುಖ್ಯ. “ಈ ವಿಷಯದ ಬಗ್ಗೆ ಈಗ ಮಾತನಾಡುವುದು ಸೂಕ್ತವಲ್ಲ, ನಾವು ನಂತರ ಶಾಂತವಾಗಿ ಮಾತನಾಡೋಣ” ಎಂದು ಹೇಳಿ ಹಿಂದೆ ಸರಿಯುವುದು ಅವಮಾನವಲ್ಲ, ಬದಲಿಗೆ ಜಾಣ್ಮೆ.

ಡಿಜಿಟಲ್ ಡಿಟಾಕ್ಸ್ ಮತ್ತು ಗಮನ ಕೇಂದ್ರೀಕರಣ

ಈ ಕಲೆಯನ್ನು ಬಲಪಡಿಸಲು ನಿಯಮಿತವಾಗಿ ಡಿಜಿಟಲ್ ಡಿಟಾಕ್ಸ್ ಮಾಡುವುದು ಸಹಾಯಕವಾಗುತ್ತದೆ. ವಾರಕ್ಕೊಮ್ಮೆ ಅಥವಾ ದಿನಕ್ಕೆ ಕೆಲ ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣ ದೂರ ಇರುವುದು ಮನಸ್ಸಿಗೆ ಒಂದು ರೀತಿಯ ಶುದ್ಧೀಕರಣ ನೀಡುತ್ತದೆ. ಈ ಸಮಯದಲ್ಲಿ ನಿಮ್ಮೊಳಗಿನ ಆಲೋಚನೆಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ, ಬಾಹ್ಯ ಶಬ್ದಗಳಿಂದ ಮುಕ್ತವಾಗಿ.

ಪ್ರತಿ ವಾರ ಒಂದು ದಿನ, ಅಥವಾ ದಿನದ ಕೆಲ ಗಂಟೆಗಳ ಕಾಲ “ನೋ ನೋಟಿಫಿಕೇಶನ್ ಟೈಮ್” ಎಂದು ಘೋಷಿಸಿಕೊಳ್ಳಿ. ಈ ಸಮಯದಲ್ಲಿ ನಿಮ್ಮ ಗಮನ ಸಂಪೂರ್ಣವಾಗಿ ನಿಮ್ಮ ಗುರಿಗಳ ಮೇಲೆ, ನಿಮ್ಮ ಆಪ್ತರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇದು ಕ್ರಮೇಣ ನಿಮಗೆ ಯಾವುದಕ್ಕೆ ಗಮನ ಕೊಡಬೇಕು, ಯಾವುದನ್ನು ನಿರ್ಲಕ್ಷಿಸಬೇಕು ಎಂಬ ಸ್ಪಷ್ಟತೆಯನ್ನು ನೀಡುತ್ತದೆ.

ಕೆಲಸದ ಸ್ಥಳದಲ್ಲಿ ಆರ್ಟ್ ಆಫ್ ಇಗ್ನೋರೆನ್ಸ್

ಕಚೇರಿಯ ರಾಜಕೀಯ (office politics) ಎಂಬುದು ಬಹುತೇಕ ಎಲ್ಲಾ ಕೆಲಸದ ಸ್ಥಳಗಳಲ್ಲೂ ಇರುತ್ತದೆ. ಸಹೋದ್ಯೋಗಿಗಳ ನಡುವಿನ ಅಸೂಯೆ, ಗಾಸಿಪ್, ಅನಗತ್ಯ ಟೀಕೆಗಳು – ಇವೆಲ್ಲ ಸಾಮಾನ್ಯ. ಇಲ್ಲಿ ನಿಮ್ಮ ಶಕ್ತಿಯನ್ನು ಸರಿಯಾದ ಕಡೆ ಬಳಸುವುದು ಬಹಳ ಮುಖ್ಯ. ಪ್ರತಿಯೊಂದು ಗಾಸಿಪ್‌ಗೂ, ಪ್ರತಿಯೊಂದು ಅನಗತ್ಯ ಚರ್ಚೆಗೂ ಭಾಗಿಯಾಗುತ್ತಾ ಹೋದರೆ, ನಿಮ್ಮ ನಿಜವಾದ ಕೆಲಸಕ್ಕೆ ಸಮಯವೇ ಉಳಿಯುವುದಿಲ್ಲ.

ಒಬ್ಬ ಬುದ್ಧಿವಂತ ಉದ್ಯೋಗಿ ಯಾವಾಗಲೂ ತನ್ನ ಕೆಲಸದ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸುತ್ತಾನೆ, ಅನಗತ್ಯ ಚರ್ಚೆಗಳಿಂದ ದೂರ ಉಳಿಯುತ್ತಾನೆ. ಯಾರಾದರೂ ನಿಮ್ಮ ಕೆಲಸದ ಬಗ್ಗೆ ಅನಗತ್ಯ ಟೀಕೆ ಮಾಡಿದರೆ, ಅದಕ್ಕೆ ವಾದ ಮಾಡುವ ಬದಲು, ನಿಮ್ಮ ಮುಂದಿನ ಕೆಲಸದ ಮೂಲಕ ಉತ್ತರ ಕೊಡುವುದೇ ಹೆಚ್ಚು ಪರಿಣಾಮಕಾರಿ.

ಆರ್ಟ್ ಆಫ್ ಇಗ್ನೋರೆನ್ಸ್ ಮತ್ತು ಆತ್ಮಗೌರವ

ಈ ಕಲೆಯ ಒಂದು ಪ್ರಮುಖ ಅಂಶ ಎಂದರೆ ಇದು ನಿಮ್ಮ ಆತ್ಮಗೌರವವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಅಭಿಪ್ರಾಯಕ್ಕೂ, ಪ್ರತಿಯೊಂದು ಟೀಕೆಗೂ ಪ್ರತಿಕ್ರಿಯಿಸುತ್ತಾ ಇದ್ದಾಗ, ನಿಮ್ಮ ಆತ್ಮಗೌರವ ಇತರರ ಅಭಿಪ್ರಾಯದ ಮೇಲೆ ಅವಲಂಬಿತವಾಗುತ್ತದೆ. ಆದರೆ ಯಾವಾಗ ನೀವು ಆಯ್ಕೆಪೂರ್ವಕವಾಗಿ ನಿರ್ಲಕ್ಷಿಸಲು ಕಲಿಯುತ್ತೀರೋ, ಆಗ ನಿಮ್ಮ ಆತ್ಮಗೌರವ ನಿಮ್ಮದೇ ಆದ ಮೌಲ್ಯಗಳ ಮೇಲೆ, ನಿಮ್ಮದೇ ಆದ ಸಾಧನೆಗಳ ಮೇಲೆ ನಿಂತಿರುತ್ತದೆ.

ಇಲ್ಲಿ ಒಂದು ಪ್ರಮುಖ ವಿಚಾರ ನೆನಪಿಡಬೇಕು – ನಿರ್ಲಕ್ಷ್ಯ ಎಂಬುದು ಅಹಂಕಾರ ಅಥವಾ ದುರಹಂಕಾರ ಅಲ್ಲ. ಇದೊಂದು ಪ್ರಜ್ಞಾಪೂರ್ವಕ ಆಯ್ಕೆ – ನಿಮ್ಮ ಶಕ್ತಿ ಮತ್ತು ಸಮಯ ಎಲ್ಲಿ ಹೋಗಬೇಕು ಎಂಬುದನ್ನು ನೀವೇ ನಿರ್ಧರಿಸುವ ಸ್ವಾತಂತ್ರ್ಯ. ಇದನ್ನು ಸೂಕ್ಷ್ಮವಾಗಿ, ಪ್ರಬುದ್ಧತೆಯಿಂದ ಬಳಸಬೇಕು, ಎಲ್ಲರನ್ನೂ ಅಸಡ್ಡೆಯಿಂದ ನೋಡುವ ಸಾಧನವಾಗಿ ಅಲ್ಲ.

ಯಾವಾಗ ನಿರ್ಲಕ್ಷಿಸಬಾರದು?

ಈ ಕಲೆಯ ಇನ್ನೊಂದು ಮುಖ್ಯ ಅಂಶ – ಯಾವಾಗ ನಿರ್ಲಕ್ಷಿಸಬಾರದು ಎಂಬುದನ್ನೂ ಅರಿಯುವುದು. ನಿಮ್ಮ ಆಪ್ತರ, ಕುಟುಂಬದ ನಿಜವಾದ ಕಳಕಳಿಯ ಮಾತುಗಳನ್ನು, ಸಲಹೆಗಳನ್ನು ನಿರ್ಲಕ್ಷಿಸಬಾರದು. ನಿಮ್ಮ ಆರೋಗ್ಯ, ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನೂ ನಿರ್ಲಕ್ಷಿಸಬಾರದು. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಯ ರಚನಾತ್ಮಕ ಟೀಕೆಗಳನ್ನೂ (constructive criticism) ನಿರ್ಲಕ್ಷಿಸಬಾರದು – ಅವು ನಿಮ್ಮ ಬೆಳವಣಿಗೆಗೆ ಸಹಾಯಕವಾಗಬಹುದು.

ಇಲ್ಲಿ ವ್ಯತ್ಯಾಸ ಗುರುತಿಸುವುದೇ ಮುಖ್ಯ – ಯಾವುದು ನಿಮ್ಮ ಬೆಳವಣಿಗೆಗೆ ಸಹಾಯಕವಾದ ಪ್ರತಿಕ್ರಿಯೆ, ಮತ್ತು ಯಾವುದು ಕೇವಲ ನಕಾರಾತ್ಮಕ, ವಿಷಕಾರಿ ಶಬ್ದ ಎಂಬುದನ್ನು ಗುರುತಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದಕ್ಕೆ ಸಮಯ ಬೇಕಾಗುತ್ತದೆ, ಆದರೆ ಅಭ್ಯಾಸದಿಂದ ಇದು ಸಾಧ್ಯ.

ಸ್ಟೋಯಿಕ್ ತತ್ವಶಾಸ್ತ್ರದ ಸಂಬಂಧ

ಈ “ಆರ್ಟ್ ಆಫ್ ಇಗ್ನೋರೆನ್ಸ್” ಪರಿಕಲ್ಪನೆ ಪ್ರಾಚೀನ ಸ್ಟೋಯಿಕ್ ತತ್ವಶಾಸ್ತ್ರದೊಂದಿಗೆ ಆಳವಾದ ಸಂಬಂಧ ಹೊಂದಿದೆ. ಸ್ಟೋಯಿಕ್ ದಾರ್ಶನಿಕರು ಯಾವಾಗಲೂ ಹೇಳುತ್ತಿದ್ದುದು – ನಮ್ಮ ನಿಯಂತ್ರಣದಲ್ಲಿ ಇರುವುದು ಮತ್ತು ಇಲ್ಲದಿರುವುದು ಎಂಬ ಎರಡು ವರ್ಗಗಳಿವೆ. ಇತರರ ಅಭಿಪ್ರಾಯಗಳು, ಅವರ ಪ್ರತಿಕ್ರಿಯೆಗಳು, ಅವರ ಸ್ವಭಾವ – ಇವೆಲ್ಲ ನಮ್ಮ ನಿಯಂತ್ರಣದಲ್ಲಿ ಇಲ್ಲ. ಆದರೆ ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ.

ಈ ತತ್ವವನ್ನು ಅರ್ಥ ಮಾಡಿಕೊಂಡಾಗ, ಆರ್ಟ್ ಆಫ್ ಇಗ್ನೋರೆನ್ಸ್ ಇನ್ನಷ್ಟು ಸ್ಪಷ್ಟವಾಗುತ್ತದೆ. ನಾವು ಇತರರ ವರ್ತನೆಯನ್ನು ಬದಲಾಯಿಸಲಾಗುವುದಿಲ್ಲ, ಆದರೆ ಅವರ ವರ್ತನೆಗೆ ನಮ್ಮ ಪ್ರತಿಕ್ರಿಯೆಯನ್ನು ನಾವು ಸಂಪೂರ್ಣವಾಗಿ ನಿಯಂತ್ರಿಸಬಹುದು. ಈ ಅರಿವು ನಮಗೆ ಒಂದು ರೀತಿಯ ಆಂತರಿಕ ಸ್ವಾತಂತ್ರ್ಯವನ್ನು ನೀಡುತ್ತದೆ.

ದೀರ್ಘಕಾಲೀನ ಪ್ರಯೋಜನಗಳು

ಈ ಕಲೆಯನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಆಗುವ ಬದಲಾವಣೆಗಳು ಬಹಳ ಆಳವಾದವು. ಮೊದಲನೆಯದಾಗಿ, ಮಾನಸಿಕ ಶಾಂತಿ ಗಣನೀಯವಾಗಿ ಹೆಚ್ಚಾಗುತ್ತದೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಪ್ರತಿಕ್ರಿಯಿಸುವ ಒತ್ತಡದಿಂದ ಮುಕ್ತಿ ಸಿಗುತ್ತದೆ.

ಎರಡನೆಯದಾಗಿ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ. ಭಾವನಾತ್ಮಕ ಪ್ರಚೋದನೆಗಳಿಂದ ಮುಕ್ತವಾದ ಮನಸ್ಸು ಹೆಚ್ಚು ಸ್ಪಷ್ಟವಾಗಿ, ತರ್ಕಬದ್ಧವಾಗಿ ಆಲೋಚಿಸಬಲ್ಲದು.

ಮೂರನೆಯದಾಗಿ, ಸಂಬಂಧಗಳ ಗುಣಮಟ್ಟ ಸುಧಾರಿಸುತ್ತದೆ. ನಿಜವಾಗಿಯೂ ಮುಖ್ಯರಾದ ಜನರೊಂದಿಗೆ ಹೆಚ್ಚು ಗುಣಮಟ್ಟದ ಸಮಯ ಕಳೆಯಲು ಸಾಧ್ಯವಾಗುತ್ತದೆ, ಏಕೆಂದರೆ ಶಕ್ತಿಯನ್ನು ಅನಗತ್ಯ ಜನರ ಮೇಲೆ ಚೆಲ್ಲುತ್ತಿಲ್ಲ.

ನಾಲ್ಕನೆಯದಾಗಿ, ವೃತ್ತಿಪರ ಯಶಸ್ಸು ಹೆಚ್ಚಾಗುತ್ತದೆ. ಗಮನ ಮತ್ತು ಶಕ್ತಿ ಸಂಪೂರ್ಣವಾಗಿ ಕೆಲಸದ ಮೇಲೆ ಕೇಂದ್ರೀಕೃತವಾದಾಗ, ಉತ್ಪಾದಕತೆ ಮತ್ತು ಗುಣಮಟ್ಟ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ.

ಐದನೆಯದಾಗಿ, ಸ್ವಂತ ಗೌರವ ಮತ್ತು ಆತ್ಮವಿಶ್ವಾಸ ಬಲಗೊಳ್ಳುತ್ತದೆ. ಇತರರ ಅಭಿಪ್ರಾಯದ ಮೇಲೆ ಅವಲಂಬಿತವಾಗದ ಒಂದು ದೃಢವಾದ ಆತ್ಮವಿಶ್ವಾಸ ಬೆಳೆಯುತ್ತದೆ.

ಕೊನೆಯ ಮಾತು: ನಿಮ್ಮ ಶಕ್ತಿ ನಿಮ್ಮದೇ

ಸ್ನೇಹಿತರೆ, ಜೀವನದಲ್ಲಿ ಹೋರಾಡುತ್ತಿರುವುದೇ ಯಾವಾಗಲೂ ಶಕ್ತಿಶಾಲಿ ಕ್ರಮ ಅಲ್ಲ. ಕೆಲವೊಮ್ಮೆ ಸುಮ್ಮನಿರುವುದೇ, ನಿರ್ಲಕ್ಷಿಸುವುದೇ ಅತ್ಯಂತ ಶಕ್ತಿಶಾಲಿ ಕ್ರಮ. ನಿಮ್ಮ ಗಮನ, ನಿಮ್ಮ ಮೌನ, ನಿಮ್ಮ ಮಾತು, ನಿಮ್ಮ ಉತ್ತರ, ನಿಮ್ಮ ಭಾವನೆ – ಇವೆಲ್ಲವೂ ನಿಮ್ಮ ನಿಯಂತ್ರಣದಲ್ಲಿ ಇದ್ದರೆ, ನಿಮ್ಮನ್ನು ಅಲುಗಾಡಿಸುವುದು ಯಾರಿಗೂ ಸಾಧ್ಯವಾಗುವುದಿಲ್ಲ.

ಪ್ರತಿಯೊಬ್ಬ ಶತ್ರುಗಳಿಗೂ, ಪ್ರತಿಯೊಬ್ಬ ಟೀಕಾಕಾರರಿಗೂ, ಪ್ರತಿಯೊಂದು ಶಕ್ತಿ ಹೀರುವ ವ್ಯಕ್ತಿಗಳಿಗೂ ನೀವು ಪ್ರತಿಕ್ರಿಯಿಸುತ್ತಾ ಹೋದರೆ, ನಿಮ್ಮ ಜೀವನದ ನಿಜವಾದ ಗುರಿಗಳಿಗೆ ಸಮಯವೇ ಉಳಿಯುವುದಿಲ್ಲ. ಆದರೆ ಯಾವಾಗ ನೀವು ಆಯ್ಕೆಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತೀರೋ, ಆಗ ನಿಮ್ಮ ಶಕ್ತಿ, ನಿಮ್ಮ ಸಮಯ, ನಿಮ್ಮ ಗಮನ – ಎಲ್ಲವೂ ನಿಜವಾಗಿಯೂ ಮುಖ್ಯವಾದ ವಿಷಯಗಳ ಕಡೆಗೆ ಹರಿಯುತ್ತದೆ.

ಜಗತ್ತಿನ ಟಾಪ್ ಯಶಸ್ವಿ ವ್ಯಕ್ತಿಗಳು ಈ ಕಲೆಯನ್ನು ಕರಗತ ಮಾಡಿಕೊಂಡಿರುವುದೇ ಅವರ ಯಶಸ್ಸಿನ ಒಂದು ದೊಡ್ಡ ರಹಸ್ಯ. ಅವರು ಪ್ರತಿಯೊಂದು ಗದ್ದಲಕ್ಕೂ ಪ್ರತಿಕ್ರಿಯಿಸುವುದಿಲ್ಲ, ಬದಲಿಗೆ ತಮ್ಮ ಶಕ್ತಿಯನ್ನು ಅವರ ಗುರಿಗಳ ಕಡೆಗೆ, ಅವರ ಬೆಳವಣಿಗೆಯ ಕಡೆಗೆ ಮಾತ್ರ ಕೇಂದ್ರೀಕರಿಸುತ್ತಾರೆ.

ಇಂದೇ ಈ ಕ್ಷಣದಿಂದ ಆರಂಭಿಸಿ – ಪ್ರತಿಯೊಂದು ಸಣ್ಣ ವಿಷಯಕ್ಕೂ ಪ್ರತಿಕ್ರಿಯಿಸುವ ಮೊದಲು ಒಂದು ಕ್ಷಣ ನಿಂತು ಯೋಚಿಸಿ – “ಇದಕ್ಕೆ ನಿಜವಾಗಿಯೂ ನನ್ನ ಶಕ್ತಿ ಬೇಕೇ?” ಈ ಒಂದು ಸರಳ ಪ್ರಶ್ನೆಯೇ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಬಲ್ಲದು. ಮೌನವಾಗಿ, ಶಾಂತವಾಗಿ, ಆದರೆ ದೃಢವಾಗಿ ನಿಮ್ಮ ದಾರಿಯಲ್ಲಿ ಮುಂದುವರಿಯಿರಿ – ಯಶಸ್ಸು ನಿಶ್ಚಿತವಾಗಿಯೂ ನಿಮ್ಮದಾಗುತ್ತದೆ.

Leave a Comment

Your email address will not be published. Required fields are marked *

Scroll to Top